ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನ ಹಾಗೆಂದರೇನು?

ಲೇಖಕರು : ಡಾ| ಜಿ. ಎಸ್‌. ಭಟ್ಟ , ಸಾಗರ
ಗುರುವಾರ, ಜುಲೈ 28 , 2016

ಈ ರಂಗಭೂಮಿಯ ಚರಿತ್ರೆಯುದ್ದಕ್ಕೂ ಯಕ್ಷಗಾನ ಪದವೇ ಬಳಕೆಗೊಳ್ಳುತ್ತ ಬಂದಿಲ್ಲ. ಯಕ್ಷಗಾನ ತೀರ ಇತ್ತೀಚಿನ ಪರಿಭಾಷೆ. ಡಾ| ಕಾರಂತರು 1957ರಲ್ಲಿ ಪ್ರಕಟಿಸಿದ ತಮ್ಮ ಪುಸ್ತಕಕ್ಕೆ ``ಯಕ್ಷಗಾನ ಬಯಲಾಟ`` ಎಂದು ಹೆಸರಿಸಿದರೆ 1977ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಬರೆದುಕೊಟ್ಟ ತಮ್ಮ ಪುಸ್ತಕಕ್ಕೆ ``ಯಕ್ಷಗಾನ`` ಎಂದು ಹೆಸರಿಸಿದ್ದಾರೆ. ರಂಗಭೂಮಿಯ ಹೆಸರಿನ ಈ ಪಲ್ಲಟ ಇಪ್ಪತ್ತು ವರ್ಷಗಳ ಅವಧಿಯಲ್ಲಾದುದು. ಗಡಿಯಾರದ ಗಂಟೆಯ ಮುಳ್ಳಿನ ಚಲನೆಯಂತೆ, ಒಂದು ಅಂಕೆಯಿಂದ ಇನ್ನೊಂದು ಅಂಕೆಗೆ ತಲುಪಿದ ಮೇಲಷ್ಟೇ ಈ ಪಲ್ಲಟ ಗಮನಕ್ಕೆ ಬರು ವಂತಹದು. ಭಾಷಾಶಾಸ್ತ್ರದ ಭಾಷಾಗಡಿಯಾರ ಇದ್ದ ಹಾಗೆ.

ಒಂದು ಕಾಲದಲ್ಲಿ ಯಕ್ಷಗಾನ ಬಯಲಾಟ ಎನ್ನುವುದು ಇಡೀ ರಂಗಭೂಮಿಯ ಹೆಸರಾದರೆ ಇಂದು ಯಕ್ಷಗಾನ ವಲಯದಲ್ಲಿ ಬಯಲಾಟ ಎಂದರೆ ಬಯಲಲ್ಲಿ ಆಡುವ ಆಟ. ಭವನದಲ್ಲಿ ಆಗುವ ಆಟ ಅಲ್ಲ- ಧರ್ಮಾರ್ಥ ಆಟ. ಸೇವೆ ಆಟ, ಹರಕೆ ಆಟ-ಹೊರಾಂಗಣ ಪ್ರದರ್ಶನ, ಉಚಿತ ಪ್ರವೇಶದ ಆಟ ಎಂಬ ಅರ್ಥ ಪಡೆದಿದೆ. ಬಯಲಾಟದ ಮೇಳ ಎಂದರೂ ಧರ್ಮಾರ್ಥ ಪ್ರದರ್ಶನ ನೀಡುವ ತಂಡ, ಡೇರೆ ಆಟ ಅಲ್ಲ ಎಂಬ ಅರ್ಥ ಬಂದಿದೆ. ಬಯಲಾಟ ಪದದ ಅರ್ಥ ಸಂಪೂರ್ಣ ಸಂಕುಚಿತಗೊಂಡಿದೆ. ಪರ್ಯಾಯ ಪದಗಳಾದ ಬಯಲಾಟ, ಆಟ. ದಶಾವತಾರ ಆಟ, ಭಾಗವತರ ಆಟ ಪದಗಳು ಹಿಂದೆ ಸರಿದಿವೆ. ಅವುಗಳ ಸ್ಥಳದಲ್ಲೆಲ್ಲ ಯಕ್ಷಗಾನ ಬಂದು ಕುಳಿತಿದೆ.

ಒಂದು ಕಾಲದಲ್ಲಿ ಭವನದಲ್ಲಾಗಲಿ, ಬಯಲಿನ ಲ್ಲಾಗಲಿ -ಯಕ್ಷಗಾನ ಪ್ರದರ್ಶನದ ಹೆಸರು ಆಟ. ಆಟ ಕುಣಿಯುವವ- ಯಕ್ಷಗಾನ ಕಲಾವಿದ. ಆಟದ ಮೇಳ- ಯಕ್ಷಗಾನ ಪ್ರದರ್ಶನ ನೀಡುವ ತಂಡ. ಆಟದ ಶ್ರಾಯ- ಯಕ್ಷಗಾನ ಪ್ರದರ್ಶನಗಳಾಗುವ ಅವಧಿ. ಆಟದ ಪೆಟ್ಟಿಗೆ- ವೇಷದ ಸಾಮಾನುಗಳನ್ನು ಇಡುವ ಪೆಟಾರಿ. ಆಟದ ವೀಳ್ಯ-ಪ್ರದರ್ಶನದ ಸಂಭಾವನೆ... ಇತ್ಯಾದಿ.

ಹಾಗೆ ನೋಡಿದರೆ ಕನ್ನಡದಲ್ಲಿ ಎಲ್ಲವೂ ಆಟಗಳೇ. ಸುಖ ದುಃಖಗಳನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸುವ ಕನ್ನಡಿಗರ ಮನೋಧರ್ಮ ಮೆಚ್ಚುವಂತಹದು. ಯಕ್ಷಗಾನದ ಸಂದರ್ಭದಲ್ಲಿ ಆಟ ಒಂದು ಪರಿಭಾಷೆ. ಆದರೆ ಸಾಮಾನ್ಯ ಆಟವಲ್ಲ; ಲೀಲೆ. ಸರ್ವಾಂತರ್ಯಾಮಿಯ ವಿವಿಧ ಲೀಲೆ ಗಳನ್ನು ಭೂಲೋಕದ ರಂಗಸ್ಥಳದಲ್ಲಿ ಆಡಿ ತೋರಿಸಿದರೆ ಅದನ್ನು ನೋಡಿ ಪುನೀತರಾಗುತ್ತಾರೆ. ಹಾಗಾಗಿ ಆಟವೆಂದರೆ ಯಕ್ಷಗಾನ ಪ್ರದರ್ಶನ. ವೇಷ ಸಹಿತ ರಂಗಸ್ಥಳದಲ್ಲಿ ಆಡಿ ತೋರಿಸುವಂತಹದು. ಕೇರಳದ ಪರಂಪರೆಯಲ್ಲಿ ರಾಮ ನಾಟ್ಟಂ, ಕೃಷ್ಣನಾಟ್ಟಂ, ಮೋಹಿನಿ ಅಟ್ಟಂ ಎಂದಿರುವ ಹಾಗೆ. ಆಟವಲ್ಲದ್ದು ಕೂಟ ಅಂದರೆ ತಾಳ ಮದ್ದಳೆ. ಆದ್ದರಿಂದ ಯಕ್ಷಗಾನವೆಂದರೆ ಆಟ; ಆಟ ಎಂದರೆ ಯಕ್ಷಗಾನ. ಬೇಕಿ ದ್ದರೆ ಎರಡನ್ನೂ ಸೇರಿಸಿ ಯಕ್ಷಗಾನ ಆಟ. ಬೇರೆ ಯಾವುದೇ ವಿಧದ ಆಟವಲ್ಲ.

ಇದೇ ಯಕ್ಷಗಾನ ಆಟಕ್ಕೆ ಒಂದು ಕಾಲದಲ್ಲಿ ಇದ್ದ ಇನ್ನೊಂದು ಹೆಸರು ದಶಾವತಾರ ಅಥವಾ ದಶಾವತಾರ ಆಟ. ಯಕ್ಷಗಾನ ಆಟಕ್ಕೆ ಈ ಹೆಸರಿದ್ದುದರ ಬಗ್ಗೆ ಜಿಜ್ಞಾಸೆಯಿದೆ. ನಮ್ಮ ಆಟಗಳಲ್ಲಿ ಒಂದೇ ಪ್ರದರ್ಶನದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ತೋರಿಸುವ ಕ್ರಮವಿಲ್ಲ. ದಶಾವತಾರ ಎಂಬ ಒಂದು ಪ್ರಸಂಗವಿದ್ದರೂ ಅದು ಈಚಿನ ಸಂಕಲನ ವಂತೆ. ಕರಸಂಕೇತಗಳಲ್ಲಿ ವಿಷ್ಣುವಿನ ದಶಾವತಾರಗಳನ್ನು ತೋರಿಸುವ ಕ್ರಮ ಹನುಮಂತ ಪಾತ್ರದ ಪ್ರವೇಶ ನೃತ್ಯದಲ್ಲಿ ಇತ್ತಂತೆ; ಈಗ ಇಲ್ಲ. ರಾವಣ ವಧೆಯ ಕಂಡನಾಗ ವಿಶ್ವರೂಪವ ಪದ್ಯಕ್ಕೆ ರಾಮನ ಅವತಾರಗಳ ವರೆಗಿನದನ್ನು ಹಸ್ತ ಮತ್ತು ನೃತ್ಯಾಭಿನಯದ ಮೂಲಕ ತೋರಿಸುವ ಕೆರೆಮನೆ ಶಂಭು ಹೆಗಡೆಯವರ ಕ್ರಮ ತೀರ ಇತ್ತೀಚೆಗಿನದು.

ಕೆರೆಮನೆ ಶಂಭು ಹೆಗಡೆ
ರೂಢಿಯಲ್ಲಿರುವ ಪ್ರಸಂಗಗಳಲ್ಲಿ ಹತ್ತು ಅವತಾರಗಳನ್ನು ಒಂದಾದ ಮೇಲೆ ಒಂದರಂತೆ ತೋರಿಸುವ ಪ್ರದರ್ಶನಗಳಿಗೆ ಮಹತ್ವ ಬಂದಿಲ್ಲ. ಯಕ್ಷಗಾನದಲ್ಲಿರುವುದೆಲ್ಲ ಬಹುಮಟ್ಟಿಗೆ ಕೃಷ್ಣನ ಮಹಾತ್ಮೆಯೇ ಆದುದರಿಂದ ಈ ಹೆಸರನ್ನು ಹೇಳಬಹುದೇನೋ. ಯಕ್ಷಗಾನದ ರಂಗ ರೂಪಕ್ಕೆ ದಶಾವತಾರ, ದಶಾವತಾರ ಮೇಳ, ದಶಾವತಾರಿ-ಯಕ್ಷಗಾನದ ಎಲ್ಲ ಅಂಗಗಳನ್ನು ಬಲ್ಲವನು ಎನ್ನುವ ಪದ ಕೂಡ ಮರೆಯಾಗುತ್ತಲಿದೆ. ಯಕ್ಷಗಾನ ಎಂಬ ಪದವೇ ಈ ಶಬ್ದದ ಸ್ಥಾನದಲ್ಲಿ ಬಲವಾಗಿ ನೆಲೆಯೂರುತ್ತಿದೆ. ಗೋವಾ ಪ್ರದೇಶದಲ್ಲಿ ಯಕ್ಷಗಾನ ದಂತೆಯೇ ಬಯಲಾಟ ಪ್ರಭೇದವಾಗಿ ಬಯಲಾಟ ಬಳಕೆ ಯಲ್ಲಿ ಇತ್ತಂತೆ. ಇಂದು ಇದು ಮಾಯವಾಗಿದೆ. ಈ ನಾಮ ಪಲ್ಲಟದಲ್ಲಿಯೇ ಯಕ್ಷಗಾನ ರಂಗಭೂಮಿಯ ಸಮಸ್ತ ವಿಘಟನೆಯ ಬೀಜವಿದೆಯೆಂದು ವಾದಿಸಿದವರಿದ್ದಾರೆ.ಇದನ್ನು ವಿವರವಾಗಿ "ಯಕ್ಷಗಾನ ರಂಗಾವತಾರವೇ ದಶಾವತಾರವೇ?' ಪ್ರಬಂಧದಲ್ಲಿ ನಿರೂಪಿಸಲಾಗಿದೆ.

ಒಂದು ಕಾಲದಲ್ಲಿ ಯಕ್ಷಗಾನಕ್ಕೆ ಭಾಗವತರ ಆಟ ಎನ್ನುವ ಇನ್ನೊಂದು ಹೆಸರೂ ಇತ್ತು. ಭಾಗವತ ಅಂದರೆ ಹಾಡು ಗಾರನೇ. ರಂಗಸ್ಥಳದ ಸಕಲ ವ್ಯವಹಾರಗಳ ಸೂತ್ರಧಾರ, ನಿಯಂತ್ರಕ, ನಿರ್ದೇಶಕ. ಆದುದರಿಂದ ಭಾಗವತರ ಆಟ ಎಂಬ ಹೆಸರಿರಬಹುದು. ಭಗವಂತನ ಲೀಲೆಗಳನ್ನು ಆಡಿ ತೋರಿಸು ವುದರಿಂದಲೂ ಈ ಹೆಸರಿರ ಬಹುದು. ಇಂದು ಭಾಗವತನ ಸ್ಥಾನವೂ ಸ್ಥಿತ್ಯಂತರಗೊಂಡಿದೆ. ಕಥಾವಸ್ತು, ಉದ್ದೇಶ ಗಳಲ್ಲಿಯೂ ಬದಲಾವಣೆ ಗಳಾಗಿವೆ. ಈ ಹೆಸರೂ ಮರೆ ಯಾಗಿ "ಯಕ್ಷಗಾನ' ಎಂಬ ಹೆಸರೇ ಸರ್ವತ್ರ ತಳ ಊರುತ್ತಿದೆ.

ಆದ್ದರಿಂದ "ಯಕ್ಷಗಾನ' ಘಟಕವನ್ನೇ ಮೂಲ ಮಾನವಾಗಿಟ್ಟುಕೊಂಡು ಅದರ ಸ್ವರೂಪ (format) ಸಾಧ್ಯತೆ ಬೆಳವಣಿಗೆಗಳನ್ನೆಲ್ಲ ಇಡಿಯಾಗಿ ಹಿಡಿಯಬಲ್ಲ ಒಂದು ನಿರ್ವಚನವಾಕ್ಯ ಯಕ್ಷಗಾನಕ್ಕೆ ಬೇಕಾಗಿದೆ. ಅಂಥ ಸಮಗ್ರನೋಟದ ಲಕ್ಷಣವಾಕ್ಯ ಇಲ್ಲವೆಂಬುದು ವಿಪರ್ಯಾಸದ ಸಂಗತಿ. ಯಕ್ಷಗಾನಕ್ಕೊಂದು ಆಧಾರಗ್ರಂಥ ಬೇಕೆಂದು ಪ್ರತಿಪಾದಿಸುವವರು ಮೊದಲಿಗೆ ಒಂದು ವ್ಯಾವಹಾರಿಕ ಲಕ್ಷಣವಾಕ್ಯವನ್ನು ನಿರ್ಮಾಣ ಮಾಡಿಕೊಳ್ಳುವುದು ಒಳ್ಳೆಯದು. ಈಗಾಗಲೇ ಬೇಕಾದಷ್ಟು ನಿರ್ವಚನ ವಾಕ್ಯಗಳಿವೆ; ಇಲ್ಲವೆನ್ನುವುದಿಲ್ಲ. ಇಸ್ಪೀಟಿನ ಎಲೆಗಳನ್ನು ಆಟದಲ್ಲಿ ಒಗೆಯುತ್ತ ಹೋದ ಹಾಗೆ ಒಂದರ ಹಿಂದೆ ಒಂದರಂತೆ ಒಗೆಯಬಹುದು. ಇವುಗಳಲ್ಲಿ ಕೆಲವು ಕಾಲಬದ್ಧ, ಇನ್ನು ಕೆಲವು ಸಂದರ್ಭಬದ್ಧ. ಇನ್ನು ಕೆಲವು ಅನುಭವ ಜನ್ಯ. ಮತ್ತೆ ಕೆಲವು ಅಸಮಗ್ರ. ಉಳಿದವು ಅತಿವ್ಯಾಪ್ತಿ, ಅವ್ಯಾಪ್ತಿ ದೋಷಗಳಿಂದ ಕೂಡಿವೆ. ಇನ್ನು ಕೆಲವುಗಳಲ್ಲಿ ಕುರುಡರು ಆನೆ ನೋಡಿ ಹೇಳಿದ ಹಾಗೆ ಅವರವರ‌ ಶಕ್ತಿ ಸಾಮರ್ಥ್ಯ, ಅನುಭವಕ್ಕೆ ದಕ್ಕಿದಂತೆ ಅರ್ಥೈಸಿಕೊಂಡಿದ್ದಾರೆ. ಇದು ವರೆಗೆ ಬಂದ ನಿರ್ವಚನ ವಾಕ್ಯಗಳನ್ನು ಸಂಗ್ರಹಿಸಿ, ವಿವರಿಸಿ ಅವುಗಳ ಇತಿ ಮಿತಿಗಳನ್ನು ಅರ್ಥೈಸುವುದೇ ಸಣ್ಣ ಅಧ್ಯಯನವಾಗಬಹುದು. ಆ ಕೆಲಸ ಆಗಬೇಕಾದುದೇ. ಅಂಥ ನಿರ್ವಚನ ವಾಕ್ಯಗಳನ್ನೆಲ್ಲ ಕಾಲಾನುಗುಣವಾಗಿ ಪಟ್ಟಿಮಾಡಿ ಅವುಗಳ ಇತಿ ಮಿತಿಗಳನ್ನು ವಿಶ್ಲೇಷಿಸುವ ಕೆಲಸ ಶೈಕ್ಷಣಿಕವಾಗಿ ಆಗಬೇಕಾಗಿದೆ.

ಬೆಳೆದು ನಿಂತು, ಸ್ಥಿತಿಸ್ಥಾಪಕತ್ವದ ಪರಮಗುಣವುಳ್ಳ ಯಕ್ಷಗಾನ ರಂಗಭೂಮಿ ಯಾರಿಗೆ ಏನು ಬೇಕಾದರೂ ಆಗಬಹುದು. ಮುಗ್ಧ, ಭಕ್ತಪ್ರಕೃತಿಯ ಜನರಿಗೆ ತಮ್ಮ ದೈವಾರಾಧನೆಯ, ಹರಕೆ ಸಲ್ಲಿಸುವ ಒಂದು ಮಾರ್ಗ. ಬಂಡವಾಳಶಾಹಿಗಳಿಗೆ ಹಾಕಿದ ಹಣವನ್ನು ಲಾಭಸಹಿತ ಮರಳಿ ಪಡೆಯುವ ವ್ಯಾಪಾರ. ದೊಡ್ಡ ಊರುಗಳಲ್ಲಿ ಬದುಕು ಕಟ್ಟಿಕೊಂಡವರಿಗೆ ಹುಟ್ಟಿದೂರಲ್ಲಿ ಪ್ರತಿಷ್ಠೆ ತೋರಿಸುವ ಕಣ. ಕಲಾವಿದರಿಗೆ ಪ್ರಾಪ್ತಿ ಮತು ಪ್ರಸಿದ್ಧಿಯ ಹಾದಿ. ವಿದ್ವಾಂಸರಿಗೆ ವಿದ್ಯಾಗರ್ವ ತೋರಿಸುವ ಅವಕಾಶ. ಕರ್ನಾಟಕದ ಹೆಮ್ಮೆಯ ಕಲೆ, ಅಭಿಜಾತ ಕಲೆ, ಸಾಂಪ್ರದಾಯಿಕ ಕಲೆ, ಜಾನಪದ ಕಲೆ ಎಂಬೆಲ್ಲ ನುಡಿಗಳು ಭಾಗಶಃ ಮತ್ತು ಸಾಂದರ್ಭಿಕ ಸತ್ಯ ಮಾತ್ರ; ಇಡಿಯಾಗಿ ಅಲ್ಲ.

***********************



ಕೃಪೆ : http://www.ourkarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ